Thursday 9 April 2015

ಸಮರಸ ದಾಂಪತ್ಯಕೆ ಕುಡಿ ಕವಿತೆಗಳ ಹಾರೈಕೆ:


"ಅವರದ್ದು ಜಗತ್ತಿನ ಅತಿ ರಮ್ಯ ಸಮರಸಪೂರ್ಣ ದಾಂಪತ್ಯ ಜೀವನ.. ಅಲ್ಲಿ ಗಂಡ ಅನ್ನುವವ ಆಶ್ರಯಧಾತ ಮಾತ್ರವಲ್ಲ ಅಭಯದಾತ, ಗಟ್ಟಿ ದೇಹದ ಆಳವಾದ ಬೇರು ಹೊಂದಿದ ಆಲದ ಮರವಿದ್ದಂತೆ.. ಹೆಂಡತಿ ಅನ್ನುವಾಕೆ ಆ ಆಲದ ಮರಕ್ಕೆ ಅಪ್ಪಿ ನಿಂತ ಕೋಮಲ ಕುಸುಮ ಬಳ್ಳಿಯಂತೆ.. ಪರಿಪೂರ್ಣ ಜೀವನದ ಹಂತವನ್ನು ಸವಿದು, ಅನುಭವಿಸಿ, ಅನುಭೋಗಿಸಿ, ಈಗ ಅದೇ ಸ್ಮರಣೆಗಳನ್ನು ಮೆಲುಕು ಹಾಕುತ್ತಿರುವ ಆ ಪತಿ-ಪತ್ನಿಯರ ಬದುಕು ಇಲ್ಲಿದೆ..
ಪತಿ ತನ್ನ ಪತ್ನಿಗೆ:
1. ಬಾಳ ಕುಸುಮ ಕೈಪಿಡಿದು
ನಡೆದ ಬಹು ವಸಂತ
ಮತ್ತೆ ಮತ್ತೆ ಚೈತ್ರ ಕಾಲ
ಮತ್ತೆ ಕಳೆದ ಗ್ರೀಷ್ಮ ಋತು
ಇಹಕೆ ಜೊತೆಯಾಗಿಹುದು
ಪರದ ಅನೂಹ್ಯ ಭಾವತೇರು
ಏರಿದ ಅದಮ್ಯ ಸಂತಸ
===
2. ಕಾಮನಬಿಲ್ಲಿಗೆ ತಾಳಿಯ ಕಟ್ಟಿದೆ
ಸಿಕ್ಕಿಸಿ ಸೆರಗಿಗೆ ಪಂಚೆಯ ಚುಂಗು
ಹೆಜ್ಜೆಯ ಹಾಕಿದ ಸಪ್ತ ಪಾದಗಳು
ಸಪ್ತವರ್ಣದ ಅಶ್ವಗಳ ತೇರು
ಸಪ್ತ ಸ್ವರದೊಡನೆ ದಾಂಪತ್ಯ
ಸಪ್ತ ಜನುಮಗಳಿಗೂ ಸಾಂಗತ್ಯ
===
3. ನಡೆವ ದಾರಿಗಂಜಿ ಬಂತು
ನಾಚಿ ನುಲಿದ ಮಯೂರ
ಚಿಗುರೆ ಕಣ್ಣ ಚಾಂಚಲ್ಯವೇ
ಮೋಹಗೊಳಿಸಿತಪಾರ

ಉಲಿವ ಶುಕದ ಹಕ್ಕಿಧ್ವನಿ
ಇಂಪು ಕಂಪು ಸೊಂಪು
ಮಾಯಾಂಗನೆ ಯಾಮಿನಿ
ಜೀವ ಭಾವ ಮುಡಿಪು
ಅಂತರಂಗ ಬೆಸುಗೆ ಬೆಸೆದ
ಹಸನ್ಮುಖಿ ಸುಖಿ
ಒಲವ ಜೇನ ಮೊಗೆದು ಎರೆದ
ಎನ್ನ ಪ್ರಿಯ ಸಖಿ
===
4. ನಿನ್ನಿಂದಲೆ ಈ ಬಾಳಿಗೆ
ಹೊಸತು ಹಾದಿ
ಹೊಸತು ವರ್ಣ
ಹೊಸತೇ ಹೊನ್ನ ದೀವಿಗೆ
ನಿನ್ನ ಚರಣ ಸ್ಪರ್ಷದಿಂದ
ಹೊಸತು ಹುರುಪು
ಹೊಸತು ನವಿರು
ಹೊಳೆದ ಹೊಸ ದಿಗಂತ
===
5. ಮನ್ವಂತರ ಮಥನವಾಯ್ತು
ಮನದನ್ನೆ ಮುತ್ತಿಟ್ಟ ಆ ದಿನ
ಅನಂತ ಕ್ಷಿತಿಜ ದಾಟಿ ಹಾರಿ
ದಿಗ್ದಿಗಂತ ಮಂಥನ
ನೀಲಾಗಸ ಆಲಿಂಗನ
ನಿಹಾರಿಕೆಯ ಚುಂಬನ
*************************************
"ಪತಿ ಅನ್ನುವ ಪುರುಷ ಜೀವಿತದಲ್ಲಿ ಅಪಾರ ಭರವಸೆಗಳನ್ನು ಸಾಕಾರಗೊಳಿಸಿದ ಪ್ರತ್ಯಕ್ಷ ಭಗವಂತ ಎಂದು ಭಾವಿಸಿದ ಮಾದರಿ ಸತಿಯಾಕೆ.. ತನ್ನ ಸುಕೃತವೇ ತನ್ನ ಕೈ ಹಿಡಿದು ಬಾಳ ಪೂರ್ತಿ ನಡೆಯಿತು ಅನ್ನುವ ನಂಬುಗೆಯಿಂದಲೇ ನಾಚುತ್ತಲೇ ಭಾವ ಸಾಗರದಲ್ಲಿ ಆ ಹೆಂಡತಿ ಈಜುವ ಪರಿ ಇದು.."
ಪತ್ನಿ ತನ್ನ ಪತಿಗೆ:
1. ಮಂಗಳವಾದ್ಯದ ಸುಸ್ವರದಲ್ಲಿ
ಮಂತ್ರತಾರಕದ ಮಹೂರ್ತದಲ್ಲಿ
ಧರ್ಮಾರ್ಥ ಕಾಮಮೋಕ್ಷಗಳ ಬಂಧನ
ಇನಿಯನ ಹಸ್ತದಿ ಬೆಸೆದ ಸಂವೇದನ
ಮುಂದಿನದೆಲ್ಲಾ ಗಂಧರ್ವಗಾನ
===
2. ಹುರಿ ಮೀಸೆ, ಕುಡಿ ಪಂಚೆ
ಉಟ್ಟಿದ್ದ ಗುಣವಂತ
ಜರಿ ಪೇಟ, ಮಣಿ ಬಾಸಿಂಗ
ತೊಟ್ಟಿದ್ದ ರೂಪವಂತ
ನನ್ನ ದೇವರೆ ಇವರು
ಧೀಮಂತ ಅನವರತ
===
3. ಮುಡಿಸಿದ ಮಲ್ಲಿಗೆ ಬಾಡದೆ ಉಳಿದು
ಇಂದಿಗೆ ಕಳೆಯಿತು ಬಹುವರ್ಷ
ಎಣಿಸಿದ ದಿನಗಳು ದಾಟಿದ ಮಾಸ
ಮಾಸದೆ ಉಳಿದಿದೆ ಅದೇ ಹರ್ಷ
ಅಂದಿಗೂ ಇಂದಿಗೂ ಚೆಂದವೇ ಬದುಕು
ಚೆಂದನವನದ ಚೆಲುವು
ಗಂಧದ ಪರಿಮಳ ಸೋಕಿದೆ ಹರಡಿದೆ
ಕುಂದದ ಅಂದದ ಒಲವು
ತುಂಬಿದ ಜೀವನ ಹೊನ್ನಿನ ಪಾತ್ರೆ
ಪಾಯಸ ಇದೆ ಅದರೊಳಗೆ
ಅದ್ದಿದ ಕೈಯನೇ ನೆಕ್ಕಿದೆ ಮಾತ್ರ
ತುಂಬಿಯೇ ಉಳಿದಿದೆ ಹಾಗೆ
===
4. ನಕ್ಕಿದ್ದು ಹಲಬಾರಿ ಅತ್ತಿದ್ದೆ ಕಡಿಮೆ
ನಗಿಸಿದ್ದ ಒಡೆಯರಿಗೆ ಸಾವಿರದ ಶರಣು
ಸುಖದಲ್ಲಿ ತೇಲಿಸಿದ ಅಸಮಧಾನಗಳ ಓಡಿಸಿದ
ಎನ್ನಾತ್ಮ ಬಂಧುವಿಗೆ ಕೈಮುಗಿದು ಶರಣು
===
5. ನನ್ನ ನಿನ್ನ ಮುಗಿಯದ ಪಯಣ
ಸಾಗಿದೆ ನಿಲ್ಲದೆ ನಲ್ಲ
ಉಬ್ಬರ ಇಳಿದಿದೆ, ಅಲೆತುಯ್ದಾಡಿದೆ
ನಾವೆಯ ನಡೆಸಿಹೆಯಲ್ಲ
ಅಂಬಿಗ ನಂಬಿಹೆನಲ್ಲ
**************
(ಇಂತದ್ದೊಂದು ಮಾದರಿ ದಾಂಪತ್ಯ ಹಾಗೂ ಅಪೂರ್ವ ದಂಪತಿಗಳು ಇದ್ದಾರೆ.. ಇಲ್ಲಿರುವ ಎಲ್ಲಾ ಭಾವಗಳ ಆಯಾಮಗಳು ಅಕ್ಷರಶಃ ಅವರ ಜೀವನದ ವಿವಿಧ ಮಜಲುಗಳು.. ನಾನು ನೋಡಿರದ, ಆದರೆ ಆ ಬಗ್ಗೆ ಕೇಳಿದ ಮೆಚ್ಚುಗೆಯ ನುಡಿಗಳೇ ಈ ಕುಡಿಕವಿತೆಗಳಿಗೆ ಪ್ರೇರಣೆ)
-ವಿಶ್ವಾಸ್ ಭಾರದ್ವಾಜ್

No comments:

Post a Comment